ಶುಕ್ರವಾರ, ಮೇ 28, 2010

ತೋಚಿದ್ದು ಗೀಚಿದ್ದು

ಕಾಡಿ ಬೇಡಿ ಬಂದಿಲ್ಲ
ಕೇಡಿ ನಾ ಅಲ್ಲ               

ಬಿದ್ದು ಬೇಡಿಲ್ಲ
ಕದ್ದು ನೋಡಿಲ್ಲ

ನೀ ನೆನಸದಿ ಹಾಡಾಗಿ ಬಂದೀನಿ
ನೀ ಹಾಡು ಪದ ಆಗಿ ಬಂದೀನಿ
ನೀ ಬಯಸಿದ ಗುಣ ಹೊತ್ತು ತಂದೀನಿ

ನೀ ಒಲಿದರ ನಾ ಹಾಡು
ನೀ ಒಲಿಯದಿದ್ದರ ನಾ ಹಾಳು

ಶನಿವಾರ, ಮೇ 22, 2010

ಉತ್ತರ ಕರ್ನಾಟಕ


ಉತ್ತರ ಕರ್ನಾಟಕದಾಗ್ ಕಣ್ಮರಿಆಕ್ಕಿರೋ ಒಂದಿಷ್ಟು  ಆಚರಣೆಗಳು... ಜನಪದ, ಸೋಬಾನ್ ಪದ, ಗಿಗಿ ಪದ, ಒಡಪು, ಒಡಗತಿ... 

ನಮಲ್ಲಿ ಒಡಪುಗಳು
ನಮ್ಮಲ್ಲಿ ಅಂದ್ರ ಉತ್ತರ ಕರ್ನಾಟಕದಾಗ್ ಮನ್ಯಾಗ ಯಾವದರು ಲಗ್ನ, ಮುಂಜವಿ, ಹುಟ್ಟು ಹಬ್ಬ... ಅಂದ್ರ ಆರತಿ ಮಾಡೋ ಯಾವದೇ ಸಂದರ್ಭದಾಗ... ಗಂಡಗ್ ಹೆಂಡತಿ ಹೆಸರು ಕೆಳುದು... ಹೆಂಡತಿಗೆ ಗಂಡನ ಹೆಸರು ಕೇಳೋದು...
ಬಾಳ ಚೆಂದ ಇರತೆತಿ... 

ಅದು ಗಂಡನ ಹೆಸರು ಹೇಳುದು ಹಂಗ ಅಲ್ಲರೀ... ಉಪ್ಪು ಕಾರ್ ಹಚಿ ಹೇಳುದು ಅಂತರ... ಅಂದ್ರ ಹಿಂದ್ ಮುಂದ ಸ್ವಲ್ಪ ವರ್ಣನ ಮಾಡಿ ಹೇಳುದು... ಅಯ್ಯೋ ನಮ್ಮಲ್ಲೇ ಹುಡಗ್ಯರು ನಾಚಿ... ಸೆರಗಿನ ಅಂಚು ಬಾಯಾಗ್ ಹಿಡಕೊಂಡು... ಅಲ್ಲೇ ಮುಸು ಮುಸು ನಕ್ಕೊಂತ... ಹೇಳತಾರ್ ... ಆಹಾ!! ಏನ್ ಚೆಂದ ಹೇಳತಾರಿ. ಆ ಗಂಡಿಗೆ ಒಪ್ಪುಹಂಗ... 

ನಾ ಕೇಳಿದ ಕೆಲವೊಂದು ಒಡಪು.ನಮ್ಮ ಅಪ್ಪಾಜಿ ಮತ್ತ ಅವ್ವ  ಮದುವೆ ವಾರ್ಷಿಕೊತ್ಸವದಾಗ್... 
ನಮ್ಮ ಅಕ್ಕ  ಆರತಿ ಮಾಡೊವಾಗ್, ಹೇಳಕ್ಕ ಮಾಮರ ಹೆಸರು,  ಹಂಗ ಇಲ್ಲ... ಉಪ್ಪು ಕಾರ.... ಕಾರ ಸ್ವಲ್ಪ ಜಾಸ್ತಿ ಹಾಕಿ ಹೇಳಬೇಕಾ ಮತ್ತ...

ನಮ್ಮಾಕ್ಕ ಆರತಿ ಕಯಾಗ್ ತುಗೊಂಡು...
ಗುಲಾಬಿ ಗುಂಪು
ಮಲ್ಲಿಗಿ ಸಂಪು
ನನಕಿಂತ ನಮ್ಮ ರಾಯರು ಬಲು ಕೆಂಪು...
ಇನ್ನು ನಮ್ಮ ಭಾವನ್ ಪಾಳೆ, ಹಂಗ ಆರತಿ ಈಡೊದದ್ರ , ಗಸ್ತಿ ಹೋದಬೇಕಾಕೆತ್ರಿ ನಮ್ಮ ಮನಿದು ಇವತ್ತು ರಾತ್ರಿ ... ವಿಚಾರ ಮಾಡಿ ಆರತಿ ಇಡಬಹುದು ಅಂದೇ. ಹೇಳತೆನಿ ಕೇಳು ಅಂದ್ರು ....
ಮಲ್ಲಿಗಿಹಂತ ಮಡದಿ
ಮಾತಾಡಿದರ ಮುತ್ತು
ಆಭರಣದ ಮುತ್ತು
ಗುಲಾಬಿ ಹಂತ ನಾದಿನಿ 
ನಕ್ಕರೆ  ಮುತ್ತೆ ಮುತ್ತು
ಮುತ್ತು ಆಭರಣದ ಮುತ್ತಲ್ಲ ಮದ್ದು ಕೊಡೊ ಮುತ್ತು.
ಮಾತಾಡಮ್ಮ ಈಗ,
ಇನ್ನೊಂದು ಬೇಕಾ ಒಡಪು ಅಂದ್ರು... ಒಬ್ಬರಿಗೆ ಒಂದೇ ಚಾನ್ಸ್ ಅಂದು ಸುಮ್ನಾದೆ :) ... 

ಇನ್ನು ನಮ್ಮ ಚಿಕ್ಕಮ್ಮನ ಸರದಿ, ಕಾಕಿ,  ಜೋರಾಗಿ ಹೇಳ್ರೀ ಅಂದೇ,  ಅಯ್ಯೋ ನನಗ ಒಡಪೆಲ್ಲ ಬರಲ್ಲಪ್ಪ...ಹಂಗ ಆರತಿ ಇಟ್ಟರ ಕಾಕಗ್ ಅವಮಾನ ಮಾಡದಂಗ... ಹಂಗೆ ಒಂಟಿ ಹೆಸರು ಹೇಳಂಗಿಲ್ಲರಿ ನಮ್ಮಕಡೆ ಅಂತ ಏನೋ ಒಂದು ಹೇಳಿ... ಅವರ ಬಾಯಿ ಬಿಡಸೋದು... ಅವರು ಶುರು ಮಾಡಿದ್ರು...
ಗಚ್ಚಿನ್ ತುಳಸಿಕಟ್ಟಿ
ಮುತ್ತಿನ ಬೃಂದಾವನ
ಅತ್ತೆ ನಿಲಮ್ಮನ್ನ ಹೊಟ್ಟಿಯಲ್ಲಿ
ಮುತ್ತಿನಂತವರು ಹುಟ್ಟ್ಯರು... ನಮ್ಮ ರಾಯರು...

ಹಿಂಗೆ ನಮ್ಮ ಹೊಲದಾಗ್ ಕೆಲಸ ಮಾಡೋ ಬಸಪ್ಪಣ್ಣ ಮತ್ತ ಅವರ ಹೆಂಡತಿ ರೇಣಮ್ಮ ಅವರನ್ನು ಆರತಿ ಮಾಡಲಿಕ್ಕೆ ಎಬಸದೆ... ಇಬ್ಬರು ಜಗಳ ಮಾಡಿರೋ ಟೈಮ್... ಆದರು ಏನ್ ಒಡಪ ಹೇಳತಾರು ಅಂತ ಜಗಳದ ಟೈಮ್ನ್ಯಾಗ...

ಕಟಗ ರೊಟ್ಟಿ ಕಾರದ ಚಟ್ನಿ
ಕಟಕೊಂಡು ಹೋಗು ಅಂದ್ರ ಸಿಟ್ಟ ಮಾಡಕೊಂಡು ಹೊಕ್ಕನ ನಮ್ಮ ರಾಯ ಅಂದ್ಲು....
ಇನ್ನು ಬಸಪಣ್ಣನ ಸರದಿ...
ಹಗ್ಗದಲೇ ಹೊಡದರ...
ಮಗ್ಗಲ್ಲೇ (ಮಗ್ಗುಲಲ್ಲಿ)  ಬರತಾಳ ... ನನ್ನ ಹೆಂಡತಿ :)

ಅಂದ್ರ ಸಿಟ್ಟು ಇರಲಿ,  ಪ್ರೀತಿ ಇರಲಿ ... ಬಯಬೇಕಂದ್ರು... ಎಲ್ಲದಕ್ಕೂ ಅದರಲ್ಲೇ ಹೇಳಿ ಮುಗಸಿಬಿಡೋದು...
ಇನ್ನೊಂದಿಸ್ಟು ನಾನ್ ಕೆಳಿರು ಒಡಪುಗಳು
ಅಲ್ಲೇ ಅದಾರ್
ಇಲ್ಲೇ ಅದಾರ್
ದಾರಿಯಾಗ ಅದಾರ್
ಧಾರವಾಡದಾಗ್  ಅದಾರ್
ಹತ್ಯಾರ ಕುದರಿ ಮರಿ
ಬರತಾರ್ ನಮ್ಮ ಮನೆತನದ  ಧರಿ.
ನಮ್ಮ ರಾಯರು 

ನೂರೆಂಟು ಕೆಳಿನಿ, ನೆನಪಿಗೆ ಇದ್ದವು ಇಸ್ಟೇ.... ನಮ್ಮಕಡೆ ಸಂಸ್ಕೃತಿ ಬಾಳ ಚೆಂದ...
ಕುಟ್ಟೊವಾಗ, ಬಿಸುವಾಗ್,  ಕಾಳೂ ಹಸನ್ ಮಾಡುವಾಗ್... ಎಲ್ಲ ಎಲ್ಲ ತರದ ಹಾಡು... ನಮ್ಮ ಅಜ್ಜಿ ಮತ್ತ ಅವ್ವ ಬಿಸಲಿಕ್ಕೆ ಕುಂತರ ಈಗೂ ನಮ್ಮ ಹೆಸರಿನ ಮ್ಯಾಲೆ... ಅಂದ್ರ ನಾವು ಹೆಂಗ ಅದಿವಿ... ಅನ್ನೋದನ್ನ... ಹಾಡಿನ ರೂಪದಾಗ್ ಹೇಳತಾರ್... ಕೇಳಲಿಕ್ಕೆ ಒಂದು ಸಡಗರ...

ಇನ್ನು ಜೋಕುಮಾರನ ಬಗ್ಗೆ....
ನಮ್ಮಲ್ಲಿ ಹೊಲ  ಇರೋವರ (ರೈತರ) ಮನಿಗೆ ಜೋಕಮಾರನ್ನ ತುಗೊಂಡು ಬರತಾರ್... ಅದೇನು ಒಂದು ದೊಡ್ಡ ಹಬ್ಬ ಅಲ್ಲ... ಆದರು ಅವರು ಬಂದು ಒಂದಿಷ್ಟು ಹಾಡ ಹೇಳಿ... ಜೋಳ ಇಲ್ಲಂದ್ರ ನಾವ್ ಏನು ದವಸ ಕೊದತಿವೋ ಅದನ್ನ ತುಗೊಂಡು ಹೊಕ್ಕರ... ಅವರ ಹೇಳೋ ಹಾಡೊಂದು ನೆನಪಿಗೆ ಬರಾಕತ್ತೆತಿ... ಬರೀತೀನಿ ಓದ್ರೀ...
ಅಡ್ಡಡ್ಡ ಮಳಿ ಬಂದು ದೊಡ್ಡ ದೊಡ್ಡ ಕೇರಿ ತುಂಬಿ...
ಒಡ್ಡು ಗಳೆಲ್ಲ   ಹಯನಾಗಿ ಜೋಕುಮಾರ...
ಹಾಗಾಲದ ಹೂವು ಮೂಡಿದಾನ ಜೋಕುಮಾರ ಜೋಕುಮಾರ...
ಹಾಗಾಲದ ಹೂವು ಮೂಡಿದಾನ ಜೋಕುಮಾರ...
ಹಾರುರ್ ಹುಡಗಿ ನನಗೆಂದ ಜೋಕುಮಾರ...
ಕುಂಬಳದ ಹುವ ಮೂಡಿದಾನ ಜೋಕುಮಾರ ಜೋಕುಮಾರ...
ಕುಂಬಾರನ ಮಗಳು ನನಗೆಂದ ಜೋಕುಮಾರ..
ಹಿಂಗೆ ಆ ಹೂವು ಅವರ ಮಗಳು ಇವರ ಮಗಳನ್ನ ಕೇಳೋದು ಹಾಡು ಎಲ್ಲ ಕೇಳಾಕ ಒಂದು ಚೆಂದ...

ಗುರ್ಜಿ ಪದ
ಗುರ್ಜಿ ಅಂದ್ರ ಬಹಳಷ್ಟು ಜನಕ್ಕ ಏನು ಅಂತ ಗೊತ್ತಿಲ್ಲ ಈಗ ಕೇಳಿದ್ರ... ಗುರ್ಜಿ ಅಂದ್ರ ಉತ್ತರ ಕರ್ನಾಟಕದಾಗ್ ಮಳಿ ಆಗಲಾರದ ಸಮಯದಾಗ್ ಹೊಲದಾಗ್ ಕೆಲಸ ಮಾಡು ಹೆಣ ಮಕ್ಕಳು ಮಳಿರಾಯಗ ಗುರ್ಜಿ ರೂಪದಾಗ್  ಬೇಡಕೊಳುದು... ಈ ಆಚರಣ್ಯಾಗ ಒಬ್ಬ ಹೆಣಮಗಳನ್ನ ಗುರ್ಜಿ ಅಂತ ಮಾಡತಾರ್... ಆ ಗುರಜಿ ಆದಂತಕಿ,  ರೊಟ್ಟಿ ಮಾಡು ಹಂಚ್ನ್ಯಾಗ ಒಂದು ಗುಳವ್ವನ ಇಟಕೊಂದು ಅದರ ಕೂಡ ಒಂದಿಷ್ಟು ಕರ್ಕಿ ಇಟ್ಟಕೊಂಡು.. ತಲಿ ಮ್ಯಾಲೆ ಹೊತ್ಕೊಂಡು...ಹಾಡ ಹಾಡಕೊಂತ ಎಲ್ಲರು ಮನಿ ಸುತ್ತತಾ... ಮಳೆರಾಯ ಬೇಗನೆ ಸುರಿಯಪ್ಪ ಅಂತ ಕೇಳ್ತಾರೆ....
 ಗುರ್ಜಿ ಗುರ್ಜಿ  ಹಳ್ಳ  ಕೊಳ್ಳ  ತಿರಗಾಡಿ  ಬಂದೆ
ಬಣ್ಣ  ಕೊಡ್ತೀನಿ  ಬಾ  ಮಳಿಯೇ  ಬಾ  ಮಳಿಯೇ...

ಸುಣ್ಣ  ಕೊಡ್ತೀನಿ  ಸುರಿಮಳಿಯೇ  ಸೂರಿ  ಮಳಿಯೇ
ಕರ  ಮಳಿಯೇ  ಕಪಟ್ಟ  ಮಳಿಯೇ  ಬೇಗನೆ  ಬಾ  ಸೂರಿ  ಮಳಿಯೇ
ಗೌರಿ ಹುಣ್ಣಿಮೆ
ಇನ್ನೊಂದು ಗೌರಿ ಹುಣ್ಣಿಮೆ ... ಹೆಣ್ಣ  ಮಕ್ಕಳನ್ನ ಗಂಡನ ಮನಿಯಿಂದ ತವರು ಮನಿಗೆ ಕರಸ್ಕೊಂಡು ಆಚರಿಸೋ ಹಬ್ಬ... ಅಂದ್ರೆ ಹೆಣ್ಣ ಮಕ್ಕಳಿಗಾಗೆ ಇರೋ  ಈ ಹಬ್ಬ. ಮೊದಲ ೫ ದಿನ ಮತ್ತ ಆದ ೫ ದಿನ,  ರಾತ್ರಿ ಎಲ್ಲ ಆಟಾ ಆಡುದು,  ಹಾಡ ಹೇಳುದು, ವೇಷ ಹಾಕುದು,  ವಿಶೇಷ ಅಂದ್ರ, ಎಲ್ಲ ವಯಸಿನ ಹೆಣ್ಣ ಮಕ್ಕಳು ಈದೆ ಒಂದು ಹಬ್ಬದಾಗ್ ಹೊರಗ ಬಂದು ಆಡುದು... ವೇಷ ಹಾಕುದು ಬಾರಿ ಇರತೆತಿ... ಹೆಣ್ಣ ಮಕ್ಕಳು ಗಂಡಸರ ವೇಷ ಹಾಕಿ.. ಅಂದ್ರ ಅಲ್ಲೇ ನಮ್ಮ ಅಕ್ಕ ಪಕ್ಕದ ಓಣಿ ಗಂಡಸರ ವೇಷ ಹಾಕಿ ಅವರಂತ ಮಾತಡುದು, ನಡಗಿ. ಏನ್ ಮಸ್ತ ಇರತದ ನೋಡಬೇಕು ಅದನ್ನ.. ಯಾವತ್ತು ಅಡುಗಿ ಮನಿ ಜಗತ್ತು ಅನ್ತಿದವ್ರು ಈ ಹಬ್ಬದಾಗ್ ತಮಗ ಏನ್ ಅನಸ್ತದೋ ಅದನ್ನ ಮನಸ್ಸಿಗೆ ಬಂದಂಗ ಆಡಿ,ಹಾದಿ,  ಹಂಗಿಸಿ.... ಎಲ್ಲ ಎಲ್ಲ ಒಂದು ರೀತಿ ಚೆಂದ. ನಮ್ಮಕಡೆ ಇನ್ನು ಹೆಣ್ಣ ಮಕ್ಕಳಿದ್ರ ಹಬ್ಬ ಚೆಂದ ಅನ್ನೋ ಮಾತು. ಹಬ್ಬ ಮುಗದು ಗಂಡನ ಮನಿಗೆ ಹೋಗೋದು ಬಂದಾಗ್ ಏನೋ ಸಂಕಟ ಹೆಣ್ಣ ಮಕ್ಕಳಿಗೆ...

ತಾಯಿ ಮಗಳನ್ನ ಗಂಡನಮನನಿಗೆ ಕಳಸೊವಾಗ್  ಒಂದಿಷ್ಟು ಹಾಡು...
ಅತ್ತೆ ಮಾವಗ್ ಅಂಜಿ
ಸುತ್ತೇಳು ನೆರೆಗ  ಅಂಜಿ
ಮತ್ತೆ ಆಳುವ ದೊರೆಗ ಅಂಜಿ
 ಮತ್ತೆ ಆಳುವ ದೊರೆಗ ಅಂಜಿ ಮಗಳೇ ಅತ್ತೆ ಮನೆಯಾಗೆ ಬಾಳವ್ವ....
ಇನ್ನು ಏನೋ ಬಾಳ ಚೆಂದ ಅಯತಿ ಹಾಡು... ಗಂಡನ ಮನಿ ಓಡಿಬೇಡ, ತವರಿಗೆ ಕೆಟ್ಟು ಹೆಸರು ತರಬ್ಯಡಾ ...ಕನ್ನಡಿ ಕೈಜಾರಿ  ಹನ್ನೆರಡು ಚುರಾಗಿ... ಹೆಣ್ಣಿನ ಮನವು ಎರಡಾಗಿ... ಹೆಣ್ಣಿನ ಮನ ಎರಡಾಗಿ ಬಾಳಿದರೆ.. ಮತ್ತೆ ಆಳಿದರೆ ಫಲ ಇಲ್ಲ...
ಕರೆನ ಈ ಹಾಡು ಎಲ್ಲ ಕಾಲಕ್ಕೂ ನಮಗ ಮಾದರಿ...

ಮಗಳು ಹೋಗತ... ಈಗ ನಮ್ಮ ಅವ್ವ ಅದಾಳ  ಹಬ್ಬಕ್ಕ ಮರೀದ ನಮ್ಮ ಅಣ್ಣನ, ನನ್ನ ಕರಿಯಾಕ್  ಕಳಸ್ತಾಳ... ಇಲ್ಲಂದ್ರ ಯಾರ ನೆನಪಿತ್ತು ಕರಿಯಾಕ್ ಬರತಾರ ಅಂತ, ಈ ಹಾಡು ಹೇಳತಾಳ...
ಕಣ್ಣು  ಕಾಣುವ ತನಕ
ಬೆನ್ನು ಬಾಗುವ ತನಕ
ತಾಯಿರಲಿ ನನಗೆ ತವರಿರಲಿ
ತಾಯಿರಲಿ ನನಗೆ ತವರಿರಲಿ ನನ್ನವ್ವ
ಅಣ್ಣಯ್ಯ ಇರಲೇ  ಕಳಸಾಕೆ
ಹಡೆದವ್ವ ಈರು ತನಕ ತವರು ಮನೆ ನಮ್ಮದು
 ಹಡೆದವ್ವ ತಿರಿ ದಿನ ಒಂದು
ಹಡೆದವ್ವ ತಿರಿ ದಿನ ಒಂದು ಕಳೆದರೆ
ತವರಿನವರು ಯಾರೋ  ನಾವ್ಯರೋ

ಅತ್ತಿಗಿ ಕೈ ಗೊಂಬಿ ಆಗಬ್ಯಾಡ.... ನಾರಿ ನಡೆದರೆ ತರಬಹುದು ಅಣ್ಣಯ್ಯ... ಹಡೆದವ್ವನೆಲ್ಲಿ ತರಲಿ...ತಂಗಿ ತನ್ನ ಅಣ್ಣಗ ಮಾರಿಬ್ಯಾಡಪ್ಪ... ತಾಯಿ ಇಲ್ಲ ಅಂತ ನನ್ನ ಹಬ್ಬಕ್ಕ ಕರಿದು ಬಿಡಬ್ಯಾಡ, ತವರು ಇರುದು ಒಂದ ಅಂತ ಕೇಳಕೊತಾಳ
ಒಂದಾದ ಮ್ಯಾಲೆ ಒಂದು ಹಿಂಗ ಸಾಲು ಸಾಲು ಹಾಡು...

ಇನ್ನು ಏನೇನೋ ನಮ್ಮೂರ ಕಡೆ ನೆನಪು... ಆ ಸಮಯಕ್ಕ ತಕ್ಕಂಗ ಹಾಡು... ಜಾನಪದ... ಸೋಬಾನೆ ಪದ...ಗಿಗಿ ಪದ...ಒಡಪು,ಒಡಗತಿ.
ತಾಯಿ ಮಗಳಿಗೆ ಹೇಳೋದು... ಅತ್ತೆ ಸೋಸೆಗ್ ಹೇಳೋದು... ಅಳಿಯ ಮಾವನಿಗೆ ಹೇಳೋದು.. ಗಂಡ ಹೆಂಡತಿಗೆ ಹೇಳೋದು...
ಎಲ್ಲಾನು ಸಂಗೀತದ ರೂಪದಾಗ್, ಸರಸ ಸಲ್ಲಪಗಳು, ಜಗಳ, ಬುದ್ದಿ ಮಾತು, ಏನ್ ಖುಶಿನಪ್ಪ ಎಲ್ಲ ನೆನಸಕತ್ತರ... ಅದರಂತ ಸುಖ ಮತ್ತೊಂದಿಲ್ಲ.

  

ಭಾನುವಾರ, ಮೇ 16, 2010

ಬಾ ಗೆಳೆಯ ಹೋಗುನು ಹೂವಿನ ತೋಟಕ್ಕ
ಹೂವು ಬಾಡ್ಯವು ನೀರಿಲ್ಲದ 
ನೀ ಇಲ್ಲದ ನಾ ಬಾಡಿದಂಗ

ನೀರು ಬೇಕು ಹೂವಿಗೆ
ಹೂವಿನ ನಗುವಿಗೆ 
ನೀನು ಬೇಕು ನನಗೆ
ನನ್ನ ನಗುವಿಗೆ 

ಹೂವು ಕೇಳಿತು ಅಂದು ನೀ ಯಾಕೆ ಬಾಡಿರುವೆ?
ನಾನಂದೆ ಹೂವೆ...

ನೀನು ಬಾಡಿರುವೆ  ನೀರಿಲ್ಲದ
ನಾನು ಬಾಡಿರುವೆ  ಗೆಳೆಯನಿಲ್ಲದೆ

ಕೆಲ ಕಾಲದ ಸ್ನೇಹಿತರು

ಆಸರೆ ಅಲ್ಲದಿದ್ದರೂ ನಂಬೋ ಜೀವ... 

ನದಿಯಲ್ಲಿ ಮುಳಗುತಿರುವಾಗ.. ಮುಗಿಯಿತು ಜೀವನ ಅನ್ನೋಅಸ್ಟರಲ್ಲಿ... ಒಂದು ಸಣ್ಣದಾದ್ ಗಿಡ/ಬಳ್ಳಿ  ಸ್ವಲ್ಪ ಬೇರು ಬಿಟ್ಟು ನಿಂತಿದೆ ಅಂದ್ರೆ, ಅದನ್ನೇ ಹಿಡಕೊಂಡು... ಬದುಕಿದೆ ಬಡ ಜೀವವೇ ಅಂತಿವಿ... ಅದು ಗಟ್ಟಿ ಅಲ್ಲ ಅನ್ತಿದ್ರುನು ಸ್ವಲ್ಪ ಕಾಲ ಜೀವ ನಿಡತು... ಶಾಶ್ವತ ಅಲ್ಲ ಅಂತ ಗೊತ್ತಿದ್ರನು...ಸ್ವಲ್ಪ ಕಾಲ ಬದುಕೋದಕ್ಕೆ ಆಸರೆ ಆಯಿತು...

 ಹಿಂಗೆ ಯಾರನ್ನೋ ಭೇಟಿಯಾಗಿರತಿವಿ, ಅವರು ನಮ್ಮೊಂದಿಗೆ ಬರೋಲ್ಲ ಅಂತ ಗೊತ್ತಿದ್ರು.. ಸ್ವಲ್ಪ ಸಮಯದಲ್ಲೇ ಅವರಿಗೆ ನಮ್ಮ ಬಗ್ಗೆ ಪರಿಚಯಿಸಿಕೊಂಡು... ಅವರಬಗ್ಗೆನು ತಿಳಕೊಳು ಕುತೂಹಲ ತೋರಿಸ್ತಿವೀ... ಅದಕ್ಕೆ ಏನೋ ಮನುಷ್ಯ  ಸಂಘ ಜೀವಿ ಅನ್ನೋದು.

ಬಸನಲ್ಲೋ, ಟ್ರೈನಲ್ಲೋ, ವಿಮಾನ ದಲ್ಲೋ,  ಇಲ್ಲ ಒಂದೇ ದಾರಿಯಲಿ ನಡಿತಾ ಹೋಗತಿರ್ತಿವಿ... ಕೆಲವೊಬ್ರು ಆತ್ಮಿಯವಾಗತಾರೆ... ಕೆಲವೊಬ್ರು ಮೊದಲ ಪರಿಚಯದಲ್ಲೇ ನಾವು ಜೊತೆಗೆ ಇನ್ನು ದೂರ ಹೋಗಲಾರೆವು ಅನ್ನೋ ಸೂಚನೆ ಕೊಟ್ಟಿರ್ತಾರೆ... ಮನಸ್ಸು ಅನ್ನೋದು ಹುಚ್ಚು... ಅವರು ನಮ್ಮವರಲ್ಲ ಅಂತಿದ್ರುನು. ಸ್ವಲ್ಪ ಕಾಲ್ವಾದರೂ ನಮ್ಮೊಂದಿಗೆ ಜೊತೆಗಾರರಾಗಿ ನಮ್ಮ ಜೊತೆ ಬಂದ್ರಲ್ಲ ಅನ್ನೋ ಸಮಾಧಾನ... ಅವರು ಆ ಕ್ಷಣದಲ್ಲಿ ಆಡಿರುವ ಎರಡು ಮಾತುಗಳು... ಅವನ್ನೇ ಜೀವನ ಪೂರ್ತಿ ಮೆಲಕ ಹಾಕತಿರತಿವಿ...  ಮತ್ತೆ ಸಿಕ್ಕೆ ಸಿಗ್ತಾರೆ ಅನ್ನೋ ಭಾವನೆ. ಇನ್ನಿಲ್ಲಂದ್ರೆ ಎಂದಾದ್ರೂ ಒಂದು ದಿನ ಸಿಕ್ಕೆ ಸಿಗ್ತಾರೆ... ಮತ್ತೆ ಭೇಟಿ ಆಗೇ ಆಗತಿವಿ ಅನ್ನೋ ಬರವಸೆ... ಬರವಸೆ ಅಲ್ಲದಿದ್ರೂ ನಮ್ಮನ್ನ ನಾವು  ಸಮಾಧಾನ ಮಾಡಕೊಳು ರೀತಿ... ಇದು ಮನಸನ್ನ ಸಮಾಧಾನ ಪಡಿಸೋ ರೀತಿ...

ಒಂದಲ್ಲ ಒಂದು ದಿನಾ ಸಿಕ್ಕೆ ಸಿಗತಿವಿ ಬಿಡಿ... ವರ್ಲ್ಡ್ ಇಸ್ ರೌಂಡ್ ಯಾರ್ :)

ಸೋಮವಾರ, ಮೇ 3, 2010

ಗಿರಮಿಟ್ :)

ಎಲ್ಲರಿಗು ಗೊತ್ತೈತೋ  ಇಲ್ಲೋ ನಮ್ಮಕಡೆ ಗಿರಮಿಟ್... ಈ ಸತಿ ಇಂಡಿಯಾಕ  ಹೋದಾಗ್ ನಮ್ಮೂರಿನ ಅಂದ್ರ ಹುಬ್ಬಳ್ಳಿ ದುರ್ಗದ ಬೈಲ್ನ್ಯಾಗ್... ಮಸ್ತ ಬಾಜಾರದಾಗ್ ಸಂತಿ ಮಾಡಿ... ಸಂತಿ ಮಾಡುದು ಹೆಸರಿಗೆ... ನಾನು ಅಲ್ಲಿಗೆ ಹೋಗುದು ಗಿರಮಿಟ್ ತಿನ್ನಕ ರೀ :) ....

ಒಹ್!!  ಪಾಪ,  ಗಿರಮಿಟ್ ಅಂದರ ಎಲ್ಲರಿಗು ಗೊತ್ತೈತೋ ಇಲ್ಲೋ .. ಏನು ಅಂತಿರಬೇಕು ಅಲ್ಲ...
ನಮ್ಮಕಡೆ ಬಹಳ ಫೇಮಸ್ ಚಾಟ್ ರೀ ಅದು... ಚುಮ್ಮರಿ... ಅಹಹ
OK ಬಾಳ ಕಾಡಸುದು ಬ್ಯಾಡ...

ಚುಮ್ಮರಿ (ಮಂಡಕ್ಕಿ, ಬ್ಹೇಲ) ... ಮಾಡುವ ರೀತಿ ... ಉಳ್ಳಗಡ್ಡಿ (ಇರುಳಿ), ಟೊಮೇಟೊ, ಹಸಿ ಮೆಣಸಿನಕಾಯಿ, ಕೊತಂಬರಿ... ಎಲ್ಲ ಸಣ್ಣಗೆ ಹೆಚ್ಹಿ... ಎಣ್ಣಿ ಕಾಸಿ... ಸಾಸವಿ, ಜೀರಗಿ... ಚಡಪಡಿಸಿ... ಚಟಪಟ ಸಿದಸಿ... ಹೆಚಿದ ಹಸಿಮೆನಸಿನ್ಕೈ... ಉಳ್ಳಗಡ್ಡಿ... ಟೊಮೇಟೊ ಹಾಕಿ ಚೆನಾಗಿ ಗಿರ ಅಂತ ತಿರಗಿಸಿ... ಸ್ವಲ್ಪ ವಗ್ಗರಣಿ ಆರಲಿಕ್ಕೆ ಬಿಟ್ಟು ... ಆಮೇಲೆ ಚುಮ್ಮರಿ ಹಾಕಿ ಮತ್ತ ತಿರಗಿಸಿ ಗಿರ್ರ ಅಂತ... ಪುಟಾಣಿ ಹಿಟ್ಟು... ಕೊತಂಬರಿ ಹಾಕಿ.. ಒಂದು ಹಂಗ ಹಸಿಮೆಣಸಿನಕಾಯಿ.. ಮತ್ತ ಒಂದಿಷ್ಟು ಉಳ್ಳಗಡ್ಡಿ ಮೇಲೆ ಹಾಕಿ.... ಗಿರಮಿಟ್ ತಿಂದ್ರ... ಸತ್ತ ನರ ಎಲ್ಲ ಎದ್ದು ಓಡಾಕ್ ಹತ್ತವ  ... ತಲಿಯೋಳಾಗ ಕುಂತ ಪ್ರಶ್ನೆಕ್ಕ, ಪಟಾ ಪಟಾ ಅಂತ ಉತ್ತರ ಸಿಗತಾವರೀ... ಈದಂತು ನನ್ನ ಅನುಭವ... ಹಂಗೆ ೧೫ ದಿವಸದ ಪ್ರವಾಸದಾಗ್ ೫ ಸತೆ ಹೊರಗಿನ ಗಿರಮಿಟ್ ತಿಂದು ತಿಂದು... ನಮ್ಮ ಅವ್ವ... ಧುಳ ಇದ್ದಿದ್ದ ತಿಂದ್ರ ರುಚಿ ಅಂತ ಕಾಣತದ ಅದಕ್ಕ .. ದುರ್ಗದ್ಬೈಲ್ ಹೊಕ್ಕಿರೀ ಅಂತಿದ್ರು... ಮನೇಲೆ ಮಾಡಿದ್ರು ನನಗೇನೋ ಅಲ್ಲಿ ಹೋಗಿ ತಿಂದರೆ ಸಮಾಧಾನ... ಇವತ್ತು ಯಾಕೋ ಆ ದುರ್ಗದ್ಬೈಲ್ ನೆನೆಪಾಗಿ... ಗಿರಮಿಟ್ ಮಾಡಕೊಂಡು ತಿಂದು... ಬರಿಲಿಕ್ಕೆ ಒಂದು ಪ್ರೋತ್ಸಾಹ ಆತು... ನಮ್ಮ ಹುಬ್ಬಳ್ಳಿ ದುರ್ಗದ್ಬೈಲ್ ಗಿರಮಿಟ್ :) ...

ಹುಬ್ಬಳ್ಳಿಗೆ ಹೊದರ ಮರೀದ ಗಿರಮಿಟ್ ತಿನ್ನಬೇಕರೀಪ :)